ಮೈನಾ	 -	
ಏವೀಸ್ ವರ್ಗ, ನಿಯೊನ್ಯಾತೀ ಉಪವರ್ಗ. ಪ್ಯಾಸೆರಿಫಾರ್ಮೀಸ್ ಗಣದ ಸ್ಟರ್ನಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಹಕ್ಕಿಗಳ ಸಾಮಾನ್ಯ ಹೆಸರು. ಇದರಲ್ಲಿ ಆಕರಿಡೊತೀರಸ್, ಸ್ಟರ್ನಸ್, ಗ್ರ್ಯಾಕುಲ, ಸಾರೊಗ್ಲಾಸ್, ಮಿನೊ ಮತ್ತು ಏಪ್ಲಾನಿಸ್ ಎಂಬ ಆರು ಜಾತಿಗಳೂ ಇವುಗಳಿಗೆ ಸೇರಿದ ಒಟ್ಟು ಸುಮಾರು 18 ಪ್ರಭೇದಗಳೂ ಉಂಟು. ಇವುಗಳ ಪೈಕಿ ಪ್ರಧಾನ ಬಗೆಯೆನಿಸಿಕೊಂಡಂಥವು ಆಕ್ರಿಡೊತೀರಸ್ ಟ್ರಿಸ್ಟಿಸ್ (ಸಾಮಾನ್ಯ ಮೈನ), ಆಕ್ರಿಡೊತೀರಸ್ ಬೆಂಜಿಯಾನಸ್ (ಬ್ಯಾಂಕ್ ಮೈನ) ಆ. ಫಸ್ಕಸ್ (ಕಾಡುಮೈನ) ಸ್ಟರ್ನಸ್ ಪಗೋಡಾರಮ್ (ಕಪ್ಪು ತಲೆಯ ಮೈನ) ಸ್ಟ.ರೋಸಿಯಸ್ (ಸ್ಟಾರ್ಲಿಂಗ್ ಅಥವಾ ರೋಸಿ ಪ್ಯಾಸ್ಟರ್) ಮತ್ತು ಗ್ರ್ಯಾಕುಲ ರಿಲಿಜಿಯೋಸ (ಬೆಟ್ಟದ ಮೈನ). ಸಾಮಾನ್ಯವಾಗಿ ಮೈನ ಗಾತ್ರದಲ್ಲಿ ಬುಲ್ ಬುಲ್ ಮತ್ತು ಪಾರಿವಾಳಗಳ ಮಧ್ಯೆ ಅಂದರೆ ಸುಮಾರು 20 ಸೆಂ.ಮೀ. ಉದ್ದವಿರುವುದು. ಇದಕ್ಕೆ ಗೊರವಂಕ ಎಂಬ ಹೆಸರೂ ಉಂಟು. ದೇಹದ ಬಣ್ಣ ಕಪ್ಪು ಮಿಶ್ರಿತ ಕಂದು. ತಲೆ ಕಪ್ಪು ಬಣ್ಣದ್ದು. ಕೊಕ್ಕು ಮತ್ತು ಕಾಲುಗಳು ಹಳದಿ ಬಣ್ಣದವು. ಕಣ್ಣುಗಳ ಸುತ್ತ ಗರಿಗಳಿಲ್ಲ. ಹಾರುವಾಗ ರೆಕ್ಕೆಗಳಲ್ಲಿ ಬಿಳಿ ಬಣ್ಣದ ಗುರುತು ಕಾಣುತ್ತದೆ. ಸಾಮಾನ್ಯ ಮೈನ ಹಾರುವಾಗ ರೆಕ್ಕೆಗಳಲ್ಲಿ ಬಿಳಿ ಬಣ್ಣದ ಗುರುತು ಕಾಣುತ್ತದೆ. ಸಾಮಾನ್ಯ ಮೈನ ಭಾರತಾದ್ಯಂತ ಕಾಣಸಿಗುವ ಹಕ್ಕಿ. ರೆಕ್ಕೆಯ ಮೇಲೆ ಬಿಳಿ ಪಟ್ಟಿ ಹೊಂದಿರುವುದನ್ನು ಮೈನಾ ಎಂದೂ ಹಾಗೆ ಇಲ್ಲದವನ್ನು ಸ್ಟಾರ್ಲಿಂಗ್ ಎಂದೂ ಕರೆಯುತ್ತಾರೆ.

ಕಾಗೆ, ಗುಬ್ಬಚ್ಚಿ, ಹದ್ದುಗಳಂತೆಯೇ ಮೈನ ಜನನಿಬಿಡ ಪ್ರದೇಶಗಳಲ್ಲಿಯೂ ಯಾವ ಭಯವೂ ಇಲ್ಲದೆ ವಾಸಿಸುವುದನ್ನು ಕಾಣಬಹುದು, ಕಾಳು, ವಿವಿಧ ಬಗೆಯ ಹಣ್ಣು, ಕೀಟಗಳು ಇತ್ಯಾದಿ ಇವುಗಳ ಆಹಾರ. ಹುಲ್ಲುಗಾವಲು ಇಲ್ಲವೇ ಹೊಲಗಳಲ್ಲಿ ಮಿಡತೆಗಳನ್ನು ಹಿಡಿದು ತಿನ್ನುವುದಲ್ಲದೆ ಹೊಲ ತೋಟ ಇತ್ಯಾದಿಗಳನ್ನು ಉಳುವಾಗ ಹಾರುವ ಕೀಟಗಳನ್ನು ಆರಿಸಿ ತಿನ್ನುತ್ತದೆ. ಪ್ರತಿ ದಿನ ಸಂಜೆ ಸೂರ್ಯಾಸ್ತದ ವೇಳೆ ಬಳಗದ ಎಲ್ಲ ಹಕ್ಕಿಗಳೂ ಯಾವುದಾದರೂ ಆಯ್ದ ದೊಡ್ಡ ಮರದಲ್ಲೊ ತೆಂಗಿನ ತೋಪುಗಳಲ್ಲೊ ಕಬ್ಬಿನ ಗದ್ದೆಗಳಲ್ಲೊ ಕಲೆತು ರಾತ್ರಿ ವಿಶ್ರಮಿಸುವುವು. 

ಆಕ್ರಿಡತೀರಸ್ ಜಿಂಜಿಯಾನಸ್ ಅಥವಾ ಮೈನ ಎಂಬುದು ಟ್ರಿಸ್ ಟಿಸ್ ಪ್ರಭೇದಕ್ಕಿಂತ ಗಾತ್ರದಲ್ಲಿ ಸ್ವಲ್ಪ ಚಿಕ್ಕದು. ಸಾಮಾನ್ಯ ಮೈನ ಹಕ್ಕಿಯಂತಿರದೆ ತಿಳಿನೀಲಿ ಮಿಶ್ರಿತ ಬೂದಿ ಬಣ್ಣದ ಗರಿಗಳನ್ನು ಪಡೆದಿದೆ. ಕಣ್ಣಿನ ಸುತ್ತಲಿನ ಚರ್ಮ ತಿಳಿಕೆಂಪು ಬಣ್ಣದಿಂದ ಕೂಡಿದೆ. ಉತ್ತರ ಭಾರತದಲ್ಲಿ ಸಿಂಧ್‍ನಿಂದ ಪೂರ್ವ ಬಂಗಾಲದವರೆಗೂ ದಕ್ಷಿಣದಲ್ಲಿ ಮುಂಬೈವರೆಗೂ ಕಾಣಬರುವುವು. ಇದು ಅಷ್ಟಾಗಿ ವಲಸೆ ಹೋಗುವುದಿಲ್ಲ. 

ಸ್ಟರ್ನಸ್ ಪಗೋಡಾರಮ್ ಅಥವಾ ಕಪ್ಪು ತಲೆಯ ಮೈನ ಮತ್ತೊಂದು ಜಾತಿ. ಇದು ಸಾಮಾನ್ಯ ಮೈನಕ್ಕಿಂತ ಸಣ್ಣದು. ಮೈಬಣ್ಣ ಬೂದಿ, ಉದರ ಭಾಗ ಮಾತ್ರ ತಿಳಿಗೆಂಪು. ತಲೆಯ ಮೇಲೆ ಕಪ್ಪು ಬಣ್ಣದ ಶಿಖೆಯುಂಟು. ಭಾರತಾದ್ಯಂತ ಕಾಣದೊರೆಯುತ್ತದೆ. ಕುರುಚಲು ಕಾಡುಗಳ ಬಳಿ ಹೆಚ್ಚು ಸಾಮಾನ್ಯ. ಸಾದರಣವಾಗಿ 6-12 ಹಕ್ಕಿಗಳು ಒಟ್ಟಿಗೆ ತೋಪುಗಳಲ್ಲಿ ಇಲ್ಲವೇ ತೋಟಗಳಲ್ಲಿ ವಾಸಿಸುತ್ತವೆ. ಹಣ್ಣುಗಳು, ಕೀಟ, ಮಿಡತೆಗಳು, ಕಂಬಳಿಹುಳುಗಳನ್ನು ತಿನ್ನುತ್ತದೆ. ಇದನ್ನು ಕನ್ನಡದಲ್ಲಿ ಬೈತಲೆ ಬಸವಿ ಎಂದು ಕರೆಯುತ್ತಾರೆ.

ಗ್ರ್ಯಾಕುಲ ರಿಲಿಜಿಯೋಸ ಅಥವಾ ಬೆಟ್ಟದ ಮೈನ ಸಾಮಾನ್ಯ ಮೈನಹಕ್ಕಿಗಿಂತ ದೊಡ್ಡದು. ಪೂರ್ತಿ ಕಪ್ಪು ಬಣ್ಣದ ಹಕ್ಕಿಯಿದು. ಕೊಕ್ಕು ಮತ್ತು ಕಾಲುಗಳು ಕಿತ್ತಳೆ ಹಳದಿ ಬಣ್ಣದವು. ಕತ್ತಿನ ಹಿಂಭಾಗ ಮತ್ತು ತಲೆಯ ಪಕ್ಕಗಳಲ್ಲಿ ಕಿತ್ತಳೆ ಬಣ್ಣದ ಗರಿಸಹಿತ ಚರ್ಮ ಉಂಟು. ಘಟ್ಟಪ್ರದೇಶಗಳ ದಟ್ಟ ಕಾಡುಗಳಲ್ಲಿ ವಾಸ. ತುಂಬ ಸದ್ದುಗೈಯುತ್ತ ಕಾಡು ಅತ್ತಿ ಮುಂತಾದ ಹಣ್ಣುಗಳನ್ನು ತಿನ್ನುತ್ತ ಕಾಲ ಕಳೆಯುತ್ತದೆ. ಬಲು ಮಾತುಗಾರ ಹಕ್ಕಿ ಎನಿಸಿದ ಇದು ಬೇರೆ ಹಕ್ಕಿಗಳ ಧ್ವನಿಯನ್ನೂ ಮನುಷ್ಯರ ಮಾತುಗಳನ್ನೂ ಅನುಸರಿಸುತ್ತದೆ. ಹೀಗಾಗಿ ಮೆಚ್ಚಿನ ಪಂಜರ ಹಕ್ಕಿಯಾಗಿ ಇದನ್ನು ಸಾಕುವುದುಂಟು.

ರೋಸಿ ಪ್ಯಾಸ್ಟರ್ ಹಕ್ಕಿ (ಸ್ಟರ್ನಸ್ ರೋಸಿಯಸ್) ಸಾಮಾನ್ಯ ಮೈನ ಹಕ್ಕಿಯ ಗಾತ್ರದ್ದು. ಇದರ ಮೈಬಣ್ಣ ಗುಲಾಬಿಕೆಂಪು, ತಲೆ, ಕತ್ತು, ಎದೆಯ ಮೇಲ್ಭಾಗ, ರೆಕ್ಕೆಗಳು ಮತ್ತು ಬಾಲ ಕಪ್ಪು ಬಣ್ಣದವು. ಉತ್ತರ ಭಾರತ ಮತ್ತು ದಖನ್ ಪ್ರದೇಶದಲ್ಲಿ ಬಲು ಸಾಮಾನ್ಯ. ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುತ್ತದೆ. ಇದು ಕೂಡ ಪ್ರಧಾನವಾಗಿ ಫಲಭಕ್ಷಕ ಪಕ್ಷಿ. ಅಲ್ಲದೆ ಕೀಟ, ಮಿಡತೆಗಳನ್ನೂ ತಿಂದು ಕೃಷಿಕರಿಗೆ ಉಪಕಾರಿ ಎನಿಸಿದೆ. ಜೊತೆಗೆ ಹಲವಾರು ಜಾತಿ ಆಲ, ಅತ್ತಿ ಮರಗಳ ಪರಾಗಸ್ಪರ್ಷ ಕ್ರಿಯೆಗೆ ಸಹಕಾರಿ ಎನಿಸಿದೆ. 					 					
(ಎನ್.ಎಂ.)
									(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ